ಮನೆ ಹೊರಗೆ ಇಣುಕಿದರೆ ಕಾಣೋದು ಭಣ ಭಣ ನೆಲ.
ಒಳಗೂ ಸುಡು ಹಬೆ. ಮಳೆ ಹನಿ ಕಂಡು ನಾಲ್ಕು ವರ್ಷವಾದರೂ ದಾಟಿತ್ತು. ಊರಿನ ಎಲ್ಲರೂ ಈಗ ಚಾತಕ ಪಕ್ಷಿಗಳು.
ಮೊದಲು ಮನೆಯೊಡೆಯ ಮನೆ ಬಿಟ್ಟು ಹೊರಟ. ಪಟ್ಟಣದಲ್ಲಿ ದುಡಿದರೆ ನಾಲ್ಕು ಕಾಸು ಸಂಪಾದಿಸಿ ಮನೆಗೂ ಕಳಿಸಬಹುದು ಅಂತ!
ಆರೇ ತಿಂಗಳು. ಪಟ್ಟಣದ ಅಬ್ಬರದಿಂದ ಕಂಗೆಟ್ಟ. ವಾಪಸು ಬಂದರೆ ಕಿತ್ತು ತಿನ್ನುವ ಮನೆ.
ರೈಲು ಕಂಬಿಯ ಮೇಲೆ ಅಂಗಾತ ಬಿದ್ದ. ಪೋಲೀಸರು ಮಹಜರು ಮಾಡುವ ಗೋಜಿಗೂ ಹೋಗಲಿಲ್ಲ.
* * *
ಗಂಡನ ಶ್ರಮದ ಫಲಕ್ಕೆ ಕಾಯುತ್ತ ಕುಳಿತವಳು ಕಾಯುತ್ತಲೇ ಉಳಿದಳು. ಪುಟ್ಟವೆರಡು ಮಕ್ಕಳು ಕಣ್ಣೀರಿಟ್ಟವು. ಸ್ವಲ್ಪ ಹೆಚ್ಚು ಬರುವಂತಿದ್ದಿದ್ದರೆ ಅದನ್ನೇ ಕುಡಿಯಬಹುದಿತ್ತೋ ಏನೋ?
ಅವಳಿಗೆ ತಡೆಯಲಾಗಲಿಲ್ಲ. ಬಚ್ಚಲ ಬದಿಯಲ್ಲಿ ಬಿದ್ದಿದ್ದ ಮಡಕೆ ತಂದಳು. ಅಟ್ಟದ ಮೇಲೆ ಅದನ್ನು ಕಟ್ಟಿದಳು. ಇಬ್ಬರಿಗೂ ಅದನ್ನು ತೋರಿಸಿ, "ಗಂಜಿ ತುಂಬಿಸಿಟ್ಟಿದ್ದೇನೆ, ಹೊರಗೆ ಹೋಗಿ ಬಂದು ಕೊಡುತ್ತೇನೆ ” ಅಂದಳು.
ಪಾಪ ಮಕ್ಕಳಿಗೂ ಆಸೆಯ ಕಣ್ಣು. ಹೊರಗೆ ಹೋದ ಅಮ್ಮ ಬರುವವರೆಗೆ ಅದನ್ನೇ ನೋಡುತ್ತ ಕುಳಿತರು. ದೊಡ್ಡವಳು ಬುದ್ಧಿವಂತೆ. ತಮ್ಮನಿಗೆ ಗಂಜಿಯ ಕಥೆ ಹೇಳಿದಳು. ಅಕ್ಕಿ, ನೀರು ಎಲ್ಲ ಒಂದೊಂದಾಗಿ ವರ್ಣಿಸಿದಳು. ತಮ್ಮನೂ ಕಣ್ಣಗಲಿಸಿ ಕೇಳುತ್ತಿದ್ದ. ನೀರು ಅಂದಾಗ, ಅಕ್ಕಿ ಅಂದಾಗ ಅವನ ಒಣಗಿದ ನಾಲಗೆಯೂ ಚಿಗುರುತ್ತಿತ್ತು.
* * *
ಸಂಜೆಯಾಯ್ತು.
ದಿನವಿಡೀ ರಸ್ತೆ ಸವೆಸಿ ದೀನಳಾದ ಅಮ್ಮ ಜಗಲಿಯಲ್ಲಿ ಅಂಗಾತ ಬಿದ್ದಳು.
"ಅಮ್ಮಾ!!" ಚಿಕ್ಕವ ಓಡಿಬಂದ. ದೊಡ್ಡವಳು ಅಮ್ಮನನ್ನು ತಬ್ಬಿಕೊಂಡಳು. ಬೆಕ್ಕೊಂದು ಎತ್ತಲಿಂದಲೋ ಹಾರಿ ಬಂದು ಮಡಿಕೆ ಉರುಳಿಸಿತು. ಒಡೆದ ಮಡಿಕೆ ಮಕ್ಕಳ ಎದೆಯನ್ನೂ ಒಡೆಯಿತು.
ಮಡಕೆ ಚೂರು ನೋಡನೋಡುತ್ತಲೇ ಮಕ್ಕಳಿಬ್ಬರೂ ಖಾಲಿಯಾದರು. ಜೀವವೇ ಇಲ್ಲದ ದೇಹ ಖಾಲಿಯಲ್ಲವೇನು?
ಜಗಲಿಯಲ್ಲಿ ಮೂರು ಹೆಣಗಳು,
ಅನಾಥವಾಗಿಯೇ ಉಳಿದವು.
* * *
Sunday, 21 October 2007
Subscribe to:
Post Comments (Atom)
No comments:
Post a Comment