Sunday 21 October, 2007

ಇದು ಬರೀ ಕಥೆಯಾ?

ನೆ ಹೊರಗೆ ಇಣುಕಿದರೆ ಕಾಣೋದು ಭಣ ಭಣ ನೆಲ.
ಒಳಗೂ ಸುಡು ಹಬೆ. ಮಳೆ ಹನಿ ಕಂಡು ನಾಲ್ಕು ವರ್ಷವಾದರೂ ದಾಟಿತ್ತು. ಊರಿನ ಎಲ್ಲರೂ ಈಗ ಚಾತಕ ಪಕ್ಷಿಗಳು.
ಮೊದಲು ಮನೆಯೊಡೆಯ ಮನೆ ಬಿಟ್ಟು ಹೊರಟ. ಪಟ್ಟಣದಲ್ಲಿ ದುಡಿದರೆ ನಾಲ್ಕು ಕಾಸು ಸಂಪಾದಿಸಿ ಮನೆಗೂ ಕಳಿಸಬಹುದು ಅಂತ!
ಆರೇ ತಿಂಗಳು. ಪಟ್ಟಣದ ಅಬ್ಬರದಿಂದ ಕಂಗೆಟ್ಟ. ವಾಪಸು ಬಂದರೆ ಕಿತ್ತು ತಿನ್ನುವ ಮನೆ.
ರೈಲು ಕಂಬಿಯ ಮೇಲೆ ಅಂಗಾತ ಬಿದ್ದ. ಪೋಲೀಸರು ಮಹಜರು ಮಾಡುವ ಗೋಜಿಗೂ ಹೋಗಲಿಲ್ಲ.

* * *

ಗಂಡನ ಶ್ರಮದ ಫಲಕ್ಕೆ ಕಾಯುತ್ತ ಕುಳಿತವಳು ಕಾಯುತ್ತಲೇ ಉಳಿದಳು. ಪುಟ್ಟವೆರಡು ಮಕ್ಕಳು ಕಣ್ಣೀರಿಟ್ಟವು. ಸ್ವಲ್ಪ ಹೆಚ್ಚು ಬರುವಂತಿದ್ದಿದ್ದರೆ ಅದನ್ನೇ ಕುಡಿಯಬಹುದಿತ್ತೋ ಏನೋ?
ಅವಳಿಗೆ ತಡೆಯಲಾಗಲಿಲ್ಲ. ಬಚ್ಚಲ ಬದಿಯಲ್ಲಿ ಬಿದ್ದಿದ್ದ ಮಡಕೆ ತಂದಳು. ಅಟ್ಟದ ಮೇಲೆ ಅದನ್ನು ಕಟ್ಟಿದಳು. ಇಬ್ಬರಿಗೂ ಅದನ್ನು ತೋರಿಸಿ, "ಗಂಜಿ ತುಂಬಿಸಿಟ್ಟಿದ್ದೇನೆ, ಹೊರಗೆ ಹೋಗಿ ಬಂದು ಕೊಡುತ್ತೇನೆ ” ಅಂದಳು.
ಪಾಪ ಮಕ್ಕಳಿಗೂ ಆಸೆಯ ಕಣ್ಣು. ಹೊರಗೆ ಹೋದ ಅಮ್ಮ ಬರುವವರೆಗೆ ಅದನ್ನೇ ನೋಡುತ್ತ ಕುಳಿತರು. ದೊಡ್ಡವಳು ಬುದ್ಧಿವಂತೆ. ತಮ್ಮನಿಗೆ ಗಂಜಿಯ ಕಥೆ ಹೇಳಿದಳು. ಅಕ್ಕಿ, ನೀರು ಎಲ್ಲ ಒಂದೊಂದಾಗಿ ವರ್ಣಿಸಿದಳು. ತಮ್ಮನೂ ಕಣ್ಣಗಲಿಸಿ ಕೇಳುತ್ತಿದ್ದ. ನೀರು ಅಂದಾಗ, ಅಕ್ಕಿ ಅಂದಾಗ ಅವನ ಒಣಗಿದ ನಾಲಗೆಯೂ ಚಿಗುರುತ್ತಿತ್ತು.

* * *

ಸಂಜೆಯಾಯ್ತು.
ದಿನವಿಡೀ ರಸ್ತೆ ಸವೆಸಿ ದೀನಳಾದ ಅಮ್ಮ ಜಗಲಿಯಲ್ಲಿ ಅಂಗಾತ ಬಿದ್ದಳು.
"ಅಮ್ಮಾ!!" ಚಿಕ್ಕವ ಓಡಿಬಂದ. ದೊಡ್ಡವಳು ಅಮ್ಮನನ್ನು ತಬ್ಬಿಕೊಂಡಳು. ಬೆಕ್ಕೊಂದು ಎತ್ತಲಿಂದಲೋ ಹಾರಿ ಬಂದು ಮಡಿಕೆ ಉರುಳಿಸಿತು. ಒಡೆದ ಮಡಿಕೆ ಮಕ್ಕಳ ಎದೆಯನ್ನೂ ಒಡೆಯಿತು.
ಮಡಕೆ ಚೂರು ನೋಡನೋಡುತ್ತಲೇ ಮಕ್ಕಳಿಬ್ಬರೂ ಖಾಲಿಯಾದರು. ಜೀವವೇ ಇಲ್ಲದ ದೇಹ ಖಾಲಿಯಲ್ಲವೇನು?

ಜಗಲಿಯಲ್ಲಿ ಮೂರು ಹೆಣಗಳು,
ಅನಾಥವಾಗಿಯೇ ಉಳಿದವು.

* * *

Friday 19 October, 2007

ನಲುಗುತ್ತಿದೆ ಭಾರತ....


ಬಲು ಹಳೆಯ ಕತೆ. ಒಬ್ಬ ಕುರುಡ ಮತ್ತೊಬ್ಬ ಕುಂಟನ ಕತೆ. ಒಮ್ಮೆ ಇಬ್ಬರೂ ನಿರ್ಧಾರ ಮಾಡುತ್ತಾರೆ. ಕುರುಡ ಕುಂಟನನ್ನು ಹೆಗಲ ಮೆಲೆ ಕೂರಿಸಿಕೊಳ್ಳುತ್ತಾನೆ. ಕುಂಟ ದಾರಿ ತೋರುತ್ತಾನೆ, ಕುರುಡ ದಾರಿ ಸವೆಸುತ್ತಾನೆ. ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ ಇಬ್ಬರೂ ಹೊಟ್ಟೆ ತುಂಬಿಸಿಕೊಳ್ಳತೊಡಗುತ್ತಾರೆ. ಇದೆಲ್ಲ ಮೊದ ಮೊದಲು ಚೆನ್ನಾಗಿಯೇ ನಡೆದಿತ್ತು. ಬರಬರುತ್ತಾ ಕುಂಟ ಸ್ವಾರ್ಥಿಯಾಗತೊಡಗಿದ. ಭಿಕ್ಷೆಯಲ್ಲಿ ದೊರೆತ ಒಳ್ಳೆಯ ಪದಾರ್ಥಗಳನ್ನು ತಾನು ತಿಂದು, ಹಳಸಿದ, ಅಯೋಗ್ಯ ಆಹಾರವನ್ನು ಕುಂಟನಿಗೆ ಕೊಡತೊಡಗಿದ. ಹೇಗೂ ಕಣ್ಣು ಕಾಣದಲ್ಲ!? ಇತ್ತ ಕುಂಟ ಚೆನ್ನಾಗಿ ತಿಂದುಂಡು ಬಲಿಷ್ಟನಾದರೆ, ಅತ್ತ ಕುಂಟ ಸತ್ವ ಹೀನನಾಗಿ ಕೃಶನಾಗುತ್ತಾ ಸಾಗಿದ.
ಈ ಕಥೆ ನಮ್ಮ ದೇಶಕ್ಕೆ ಹೊಂದುವ ಮಾತು. ಕತೆಯ ಕುಂಟ ಇಂಡಿಯಾ, ಕುರುಡ ಭಾರತ! ಜಾಗತೀಕರಣದ ಸೌಲಭ್ಯ, ಸವಲತ್ತುಗಳನ್ನು ಪಡೆದು ಕೊಬ್ಬಿ ಬೆಳೆಯುತ್ತಿರುವ ಇಂಡಿಯಾ ಸವಾರಿ ಮಾಡುತ್ತಿರುವುದು, ಅದರ ದುಷ್ಪರಿಣಾಮ ಉಣ್ಣುತ್ತಿರುವ ಭಾರತದ ಮೇಲೆ!
ಜಾಗತೀಕರಣ ಅಂದ್ರೆ, ಇಡಿಯ ಜಗತ್ತನ್ನೇ ಒಂದು ಹಳ್ಳಿಯಾಗಿಸುವ ಒಂದು ಪ್ರಕ್ರಿಯೆ. ’ಗ್ಲೋಬಲ್ ವಿಲೇಜ್’ ಅನ್ನುವ ಮಾತು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲ, ಜಾಗತೀಕರಣದ ನಮ್ಮ ಕಲ್ಪನೆ ಇನ್ನೂ ವಿಶಾಲ, ಆಳ. ಜಗತ್ತು ಹಳ್ಳಿಯ ಮಾತಾಡಿದರೆ, ನಾವು ಕುಟುಂಬದ ಮಾತಾಡುತ್ತೇವೆ. ಜಗತ್ತನ್ನೇ ಒಂದು ಕುಟುಂಬವಾಗಿ ಮಾಡಿ ನಾವೆಲ್ಲ ಅಣ್ಣ ತಮ್ಮಂದಿರಂತೆ ಅಂತಃಕರಣಯುಕ್ತರಾಗಿ ಬದುಕುವುದು ನಿಜವಾದ ನಮ್ಮ ಚಿಂತನೆ. ಈ ಚಿಂತನೆ ಇದ್ದಾಗ ನಾವು ಜಗತ್ತನ್ನು ಮಾರುಕಟ್ಟೆಯಾಗಿಸುವ ಮಾತನಾಡುತ್ತಿರಲಿಲ್ಲ. ಭೋಗವಾದದಿಂದ ಜಗತ್ತನ್ನೇ ವಿನಾಶಕ್ಕೆ ತಳ್ಳಿಬಿಡುವ ಚರ್ಚೆ ಮಾಡುತ್ತಿರಲಿಲ್ಲ.
ಯಾವುದು ಎಂದಿಗೂ ಆಗಲೇಬಾರದೆಂಬ ಬಯಕೆ ನಮಗಿತ್ತೋ ಅದೇ ಈಗ ಆಗುತ್ತಿರುವುದು ದುರಂತ, ದೌರ್ಭಾಗ್ಯ! ಪ್ರಾಪಂಚಿಕತೆಯ ಹಿಂದೆ ಮನುಷ್ಯರನ್ನು ಅಟ್ಟಿ, ನಿಜವಾದ ಸುಖ-ಶಾಂತಿ-ನೆಮ್ಮದಿ ಕಳೆದುಕೊಳ್ಳುತ್ತಿರುವ ಜನರನ್ನು ಜಾಗತೀಕರಣ ಸೃಷ್ಟಿಸುತ್ತದೆ. ಹುಟ್ಟುವ ಪ್ರತಿಯೊಂದು ಮಗುವಿನ ತಂದೆ ತಾಯಿಯರೂ ಮುಂದೆ ಅದು ಸಾಫ್ಟ್ ವೇರ್ ಇಂಜಿನಿಯರ್ ಆಗಲೆಂದು ಬಯಸುತ್ತಾರೆ. ಹೀಗೆ ಇಂಜಿನಿಯರ್ ಆಗುವ ಬಯಕೆಯ ಹಿಂದೋಡುವ ಮುಖ್ಯ ಕಾರಣ ಡಾಲರ್ ಗಳೇ ಹೊರತು ಮತ್ತೇನಲ್ಲ. ಬೆಳಗ್ಗೆ ಎಂಟರಿಂದ ರಾತ್ರಿ ಎಂಟರವರೆಗೆ ದುಡಿಯುವ ಮಗ ಕೆಲಸಕ್ಕೆ ಸೇರಿದ ಕೆಲವೇ ತಿಂಗಳಲ್ಲಿ ಬದುಕುವ ಉತ್ಸಹವನ್ನೇ ಕಳೆದುಕೊಂಡುಬಿಡುತ್ತಾನೆಂಬುದನ್ನು ಗುರುತಿಸುವುದೇ ಇಲ್ಲ. ಅತ್ಯಂತ ಬುದ್ಧಿವಂತನಾದ, ಚುರುಕಾಗಿ ಕೆಲಸ ಮಾಡಬಲ್ಲ ಯುವಕರು, ಕೂಲಿ ಕಾರ್ಮಿಕರಂತೆ ಹೇಳಿದ್ದನ್ನು ಮಾಡುತ್ತಾ ಕೂರುವವರಾಗಿಬಿಡುತ್ತಾರಲ್ಲ, ಇದು ಜಾಗತೀಕರಣಾದ ದೊಡ್ಡ ಶಾಪ. ಇಷ್ಟಕ್ಕೂ ಆಶಿಷ್ಠ, ದೃಢಿಷ್ಠ, ಬಲಿಷ್ಠರಾಗಿರುವ ನಮ್ಮ ಯುವಕರು ಎ.ಸಿ. ಕೋಣೆಗಳಲ್ಲಿ ಕುಳಿತು ಮಾಡುವುದೇನು ಗೊತ್ತೇ? ಅಮೆರಿಕದ ಬ್ಯಾಂಕಿನ ವಹಿವಾಟುಗಳನ್ನು ಲೆಕ್ಕ ಇಡುವುದು, ಸೂಪರ್ ಬಜಾರುಗಳ ಬಿಲ್ಲಿಂಗ್ ವ್ಯವಸ್ಥೆ ನೋಡಿಕೊಳ್ಳುವುದು ಇಂಥದ್ದೇ ಕೆಲಸ. ಎಷ್ಟೋ ಇಂಜಿನಿಯರುಗಳಿಗೆ ತಾವೇನು ಕೆಲಸ ಮಾಡುತ್ತಿದ್ದೇವೆಂಬ ಅರಿವೇ ಇರದಂತಹ ವಿಷಮ ಪರಿಸ್ಥಿತಿ ಇದೆ. ಅಂದರೆ, ಮೂಕವಾಗಿ- ಪ್ರಶ್ನೆಗಳನ್ನೇ ಕೇಳದೆ ಕೆಲಸ ಮಾಡೋದಕ್ಕೆ ಐದಂಕಿ ಸಂಬಳ! ಇದರಿಂದಾಗಿ ಸಮಾಜದ ವ್ಯವಸ್ಥೆಯೇ ಕೆಟ್ಟು ಹೋಗಿದೆ. ಸೂಕ್ತ ಸಂಬಳ ದೊರೆಯದು ಎನ್ನುವ ಕಾರಣಕ್ಕೇ ಯುವಕರು ಶಿಕ್ಷಕ ವೃತ್ತಿಯನ್ನು ಆರಿಸಿಕೊಳ್ಳುತ್ತಿಲ್ಲ. ವೈದ್ಯರಾಗುವುದನ್ನೂ ಧಿಕ್ಕರಿಸಿ ಸಾಫ್ಟ್ ವೇರ್ ಕ್ಷೇತ್ರವನ್ನು ಆರಿಸಿಕೊಳ್ಳುತ್ತಿದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಭೂಮಿಯ ಬೆಲೆ ಗಗನಕ್ಕೇರಿ, ಕೃಷಿ ಮಾಡಬೇಕಿಂದಿದ್ದ ರೈತ, ದಿನವಿಡೀ ಹೀಗೆ ಸುಮ್ಮನೆ ದುಡಿಯುವುದಕ್ಕಿಂತ ಭೂಮಿ ಮಾರುವುದೇ ಲೇಸು ಎಂದು ಚಿಂತಿಸುತ್ತಾನೆ. ಇದು, ಜಾಗತೀಕರಣದ್ದೇ ವಿಷ ಬೀಜ.
ಇಷ್ಟಕ್ಕೆ ಮುಗಿಯಲಿಲ್ಲ. ಹಣದ ಅಮಲಿಗೆ ಬಿದ್ದ ಯುವಕ- ಯುವತಿಯರಿಗೆ ಸಂಬಂಧಗಳೇ ಬೇಡವಾಗುತ್ತವೆ. ಬೆಂಗಳೂರಿನ ಯಾವುದೇ ಕೌನ್ಸಿಲಿಂಗ್ ಸೆಂಟರಿನೆದುರು ನಿಂತರೂ ನಿಮ್ಮ ಕಣ್ಣಿಗೆ ಬೀಳುವುದು ವಿಚ್ಛೇದನದ ಬಯಕೆ ಹೊತ್ತು ನಿಂತಿರುವ ಯುವ ಜೋಡಿಗಳು! ಅವರ ಮನೆಯಲ್ಲಿ ಹಬ್ಬ ಹರಿದಿನಗಳಿಲ್ಲ. ಕುಟುಂಬದೊಡನೆ ಮುಕ್ತವಾಗಿ ಬೆರೆಯಲು ಸಮಯವಿಲ್ಲ. ಸೋಮವಾರದಿಂದ ಶುಕ್ರವಾರದವರೆಗೆ ದುಡಿದವರು ಶನಿವಾರ ಭಾನುವಾರಗಳಂದು ಮೈಮರೆತು ಕಾಲಕಳೆಯಬೇಕೆಂದು ಕಂಪೆನಿಗಳು ಬಯಸುತ್ತವೆ. ಹೀಗಾಗಿ ಆ ಎರಡು ದಿನ ಪಾರ್ಟಿಗಳಾಗುತ್ತವೆ, ಪಿಕ್ನಿಕ್ ಗಳಾಗುತ್ತವೆ. ಆಗತಾನೇ ಇಂಜಿನಿಯರಿಂಗ್ ಮುಗಿಸಿ ಬಂದ ಯುವಕ ಯುವತಿಯರಂತೂ ಝಗಮಗಿಸುವ ದುನಿಯಾದಲ್ಲಿ ಕಳೆದೇಹೋಗುತ್ತಾರೆ. ಮಾಯೆಯ ಬಲೆಯ ಪ್ರಭಾವ ಅವರನ್ನು ಸಂಸ್ಕೃತಿಯಿಂದ ಬಲುದೂರ ಕರೆದೊಯ್ದುಬಿಡುತ್ತದೆ.
ಇದಕ್ಕೆ ವ್ಯತಿರಿಕ್ತವಾದುದು ನಮ್ಮ ರೈತನ ಬವಣೆ. ಹಸಿರುಕ್ರಾಂತಿಯ ಆರಂಭದಲ್ಲಿ ಹೆಚ್ಚುಹೆಚ್ಚು ಬೆಳೆ ಎನ್ನುತ್ತಾ ಅವನ ಕೈಗೆ ರಸ ಗೊಬ್ಬರ ಕೊಟ್ಟೆವು, ಬೀಜವನ್ನಿತ್ತು, ಔಷದಿಯನ್ನೂ ಕೊಟ್ಟೆವು. ಆತನೂ ಎಲ್ಲವನ್ನು ಬಳಸಿದ. ಮೊದಲ ಕೆಲ ವರ್ಷ ಬೆಳೆಯೂ ಚೆನ್ನಾಗಿ ಬಂತು. ಈಗ ಔಷದಿಯ ಪ್ರಭಾವದಿಂದ ಭೂಮಿಯೂ ಬಂಜರಾಗಿ ಬೆಳೆ ತೆಗೆಯುವುದೆ ಕಷ್ಟವೆಂದ ಮೇಲೆ ಒಬ್ಬೊಬ್ಬರಾಗಿ ಸಾವಿಗೆ ಶರಣಾಗುತ್ತಿದ್ದಾರೆ. ಪಡೆದ ಸಾಲ ತೀರಿಸಲಾಗದೇ ನೇಣುಕುಣಿಕೆಗೆ ಕೊರಳೊಡ್ಡುವ ಸ್ಥಿತಿ ರೈತನಿಗೇಕೆ ಬಂತು? ನಾವೆಂದಾದರೂ ಯೋಚಿಸಿದ್ದೇವೆಯೇ?
ಒಂದು ಕಾಲದಲ್ಲಿ ಜಗದ ಧಾನ್ಯದ ಕಣಜವಾಗಿದ್ದ ನಮ್ಮ ನಾಡಿನ ೪೦ ಕೋಟಿ ಜನರು ದಿವಸಕ್ಕೆ ಒಮ್ಮೆ ಒಂದೇ ಹೊತ್ತಿನ ಊಟ ಮಾಡಲು ಶಕ್ತರು ಎಂಬ ವಿಚಾರ ಅರಿವಿದೆಯೇ? ಈ ದೇಶದ ಮುಕ್ಕಾಲು ಪಾಲು ಜನರಿಗೆ ಸೂಕ್ತವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ನಮಗಿನ್ನೂ ಸಾಧ್ಯವಾಗಿಲ್ಲ! ಒಂದೆಡೆ ಜಾಗತೀಕರಣದ ಜಾಗಟೆ ಬಾರಿಸುತ್ತಾ, ಏರುತ್ತಿರುವ ಸೆನ್ಸೆಕ್ಸನ್ನು, ಏರುತ್ತಿರುವ ಬಿಲಿಯನೇರುಗಳ ಸಂಖ್ಯೆಯನ್ನು ತೋರಿಸುತ್ತಿದ್ದೇವೆ. ಮತ್ತೊಂದೆಡೆ ಆತ್ಮಹತ್ಯೆಗೆ ಶರಣಾಗುವ ರೈತ , ಹಸಿವಿನಿಂದ ಕಂಗಾಲಾಗಿ ತನ್ನ ಮಕ್ಕಳನ್ನೇ ಕೊಂದು ನೆಮ್ಮದಿಯ ಸಾವು ಕಾಣುವ ತಾಯಿ. ಇವೆಲ್ಲ ಜಾಗತೀಕರಣದ ವೈಪರೀತ್ಯಗಳು.
ಜಾಗತೀಕರಣ ಮೇಲ್ನೋಟಕ್ಕೆ ಲಾಭ ಕೊಡುವುದು ಮೇಲ್ಪದರಕ್ಕೆ ಮಾತ್ರ. ಮೇಲ್ಪದರ ಅಂದರೆ ಹಾಲಿನ ಕೆನೆಯಿದ್ದಂತೆ. ಈ ಕೆನೆ ನಿರ್ಮಾಣವಾಗೋದು ಹಾಲಿನ ಸತ್ತ್ವವನ್ನು ಹೀರಿಕೊಂಡು. ಜಾಗತೀಕರಣದ ಲಾಭ ಪಡೆಯುತ್ತಿರುವ ಮೇಲ್ಪದರದ ನಿರ್ಮಾಣವೂ ಅಷ್ಟೇ.... ಹಳ್ಳಿಗಳ ಸತ್ತ್ವ ಹೀರಿಯೇ ಕೆನೆಯಾಗಿವೆ. ಈಗ ತಾವು ಪಡೆದ ಸತ್ತ್ವವನ್ನು ಹಂತಹಂತವಾಗಿ ಮರಳಿಸಿ ಜಾಗತೀಕರಣದ ಲಾಭ ಎಲ್ಲರಿಗೂ ದೊರೆಯುವಂತೆ ಮಾಡಬೇಕಾದ್ದು ನಮ್ಮದೇ ಕರ್ತವ್ಯ.
ಅದಾಗಲೇ ಬೆಂಗಳೂರಿನ ಅನೇಕ ಸಾಫ್ಟ್ ವೇರ್ ಉದ್ಯೋಗಿಗಳು ತಾವೇ ಒಂದು ತಂಡ ಕಟ್ಟಿಕೊಂಡು ದೂರದ ಬಳ್ಳಾರಿಯಲ್ಲಿ ಶಾಲೆ ನಡೆಸುತ್ತಿದ್ದಾರೆ. ಸಾಹಿತ್ಯ ಸಂವೇದನೆಯನ್ನು ಜೀವಂತವಾಗಿರಿಸಿಕೊಳ್ಳುವ ಮೂಲಕ ಆ ನಿಟ್ಟಿನಲ್ಲಿಯೂ ಹೊಸಹೊಸ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಾಲೇಜುಗಳಿಗೆ ಭೇಟಿಕೊಟ್ಟು ಸಾಫ್ಟ್ ವೇರ್ ಉದ್ಯೋಗಿಯಲ್ಲ, ಕಂಪೆನಿಯ ಒಡೆಯರಾಗಿ, ಜಗತ್ತಿಗೆ ಶಕ್ತಿ ತೋರಿಸಿ ಎಂಬ ಪಾಠ ಮಾಡುತ್ತಿದ್ದಾರೆ.
ಗಾಂಧೀಜಿಯ ಹಿಂದ್ ಸ್ವರಾಜ್ ನ ಕಲ್ಪನೆಗಳು ಇಂದಿಗೂ ಸೂಕ್ತವಾಗುವುದು ಅದಕ್ಕೇ. ೧೯೪೭ರಲ್ಲಿ ನೆಹರೂಗೆ ಪತ್ರ ಬರೆದ ಗಾಂಧೀಜಿ " ನಾವೆಲ್ಲರೂ ವಾಸಿಸ ಬೇಕಾಗಿರುವುದು ಅರಮನೆಗಳಲ್ಲಲ್ಲ, ಬಂಗಲೆಗಳಲ್ಲಲ್ಲ, ಜಗತ್ತಿನ ಉದ್ಧಾರಕ್ಕೋಸ್ಕರ ನಾವು ಗ್ರಾಮಗಳಲ್ಲಿ ವಾಸಿಸುವುದನ್ನು ಕಲಿಯಬೇಕಿದೆ" ಎಂದಿದ್ದರು. ಆಧುನಿಕ, ನಾಗರಿಕ ಎನ್ನುವ ಹೆಸರಿನಲ್ಲಿ ನಾವು ಹಳ್ಳಿಯಿಂದ ದೂರವಾಗುತ್ತಿದ್ದೇವೆ. ಈ ನಾಡಿನ ಮಣ್ಣಿನಿಂದಲೂ ದೂರವಾಗುತ್ತಿದ್ದೇವೆ. ಉತ್ತರ ಕರ್ನಾಟಕದ ಜನರ ಚಿತ್ರ ನೋಡಿದ ಬೆಂಗಳೂರಿನ ಯುವಕ ಯುವತಿಯರು ’ಅಬ್ಬಾ! ಮಂಗಳ ಗ್ರಹದಿಂದ ಬಂದವರಂತೆ ಕಾಣುತ್ತಾರೆ’ ಎಂದು ಹೇಳಿದರೆ ಖಂಡಿತ ಅಚ್ಚರಿ ಪಡಬೇಡಿ. ಪರಿಸ್ಥಿತಿ ಹಾಗೆಯೇ ಇದೆ. ನಾವೆಲ್ಲ ಮೆಕಾಲೆ ಹೇಳಿದ ಕರಿಯ ಚರ್ಮದ ಆಂಗ್ಲರಾಗಿಬಿಟ್ಟಿದ್ದೇವೆ. ನಮ್ಮ ಆಲೋಚನೆಗಳು, ಚಿಂತನೆಗಳು, ಉಡುಗೆ ತೊಡುಗೆಗಳು, ಎಲ್ಲವೂ ಪಾಶ್ಚಿಮಾತ್ಯೀಕರಣಕ್ಕೊಳಗಾಗಿವೆ. ಈ ಭ್ರಮೆಯಿಂದ ಹೊರ ಬರದ ಹೊರತು ಸಮರ್ಥ ಭಾರತದ ನಿರ್ಮಾಣ ಅಸಾಧ್ಯವೇ ಸರಿ. ಬಾರತದ ಅಂತಃ ಸತ್ತ್ವವನ್ನು, ಆತ್ಮ ಶಕ್ತಿಯನ್ನು ಅರಿಯುವ ಪ್ರಯತ್ನ ನಾವು ಮಾಡಬೇಕಿದೆ. ’ನಾವು ಕುರಿಗಳಲ್ಲ, ಹುಲಿಗಳು’ ಎಂದು ವಿವೇಕಾನಂದರು ಅವತ್ತು ಹೇಳಿದ್ದರಲ್ಲ, ಅದು ಅಂದಿನಷ್ಟೇ ಇಂದಿಗೂ ಪ್ರಸ್ತುತ. ಜಾಗತೀಕರಣದ ಆಕ್ಟೋಪಸ್ ನಮ್ಮನ್ನು ತನ್ನ ಮುಷ್ಟಿಯಲ್ಲಿ ಸಿಕ್ಕಿಸಿಕೊಳ್ಳುವ ಮುನ್ನ ನಾವು ಜ್ಞಾನದ ಹಸ್ತ ಚಾಚಿ ಜಗತ್ತನ್ನು ಶಾಂತಿ ನೆಮ್ಮದಿಯತ್ತ ಕೊಂಡೊಯ್ಯಬೇಕಿದೆ,
ಸಧ್ಯದ ಮಟ್ಟಿಗೆ ಅದೇ ದೊಡ್ಡ ಸವಾಲು.

Tuesday 16 October, 2007

ರಾಮ ಇದ್ದಲ್ಲಿ ಆರಾಮ...!!

ರಾಮನ ಬಗ್ಗೆ ಚರ್ಚೆ ಶುರುವಾಗಿದೆಯಲ್ಲಾ ಸರೀನಾ?